Sunday, October 2, 2016

ಶಾಂತಿ ಮತ್ತು ಯುದ್ಧ

ಮೂಲ: ಮೊಆಸಿರ್ ಸ್ಕ್ಲೇರ್ (ಬ್ರಜಿಲ್) ಇಂಗ್ಲೀಷಿಗೆ: ಟ್ರಿಸಿಯಾ ಫೀನಿ
ಕನ್ನಡಕ್ಕೆ: ಎಂ.ಎಸ್.ಶ್ರೀರಾಮ್

ಯುದ್ಧಕ್ಕೆ ತಡವಾಗಿಬಿಟ್ಟಿದ್ದರಿಂದ ನಾನು ಟ್ಯಾಕ್ಸಿ ಹಿಡಿಯಬೇಕಾಯಿತು. ಈಚೆಗೆ ಟ್ಯಾಕ್ಸಿಯ ಬಾಡಿಗೆಗಳನ್ನು ಜಾಸ್ತಿ ಮಾಡಿರುವುದರಿಂದ ಈ ಅನಿರೀಕ್ಷಿತ, ಅನಪೇಕ್ಷಿತ ಖರ್ಚು ಸ್ವಲ್ಪ ತೊಂದರೆಯನ್ನೇ ಮಾಡುತ್ತದೆ. ಇದರಿಂದ ಈ ತಿಂಗಳ ಬಜೆಟ್ ಗೆ ಏಟು ಬೀಳುವುದು ಖಚಿತ. ಏನೇ ಆದರೂ ನಾನು ಸಮಯಾನುಸಾರ ಹಾಜರಿ ಹಾಕಿ, ಇದಕ್ಕಿಂತ ದೊಡ್ಡ ತೊಂದರೆಯಿಂದ ಪಾರಾದೆ. ಪಂಚ್ ಕಾರ್ಡ್ ಯಂತ್ರದ ಮುಂದೆ ದೊಡ್ಡ ಕ್ಯೂ ಇತ್ತು. ಯದ್ಧಕ್ಕೆ ತಡವಾಗಿ ಬಂದಿದ್ದವನು ನಾನೊಬ್ಬನೇ ಅಲ್ಲ. ನನ್ನ ಗೆಳೆಯ ವಾಲ್ಟರ್ ಕೂಡಾ ಅಲ್ಲೇ ಗೊಣಗುತ್ತಾ ನಿಂತಿದ್ದ. ಅವನೂ ಟ್ಯಾಕ್ಸಿಯಲ್ಲಿ ಬರಬೇಕಾಯಿತಂತೆ. ನಾವುಗಳು ಪಕ್ಕಪಕ್ಕದಲ್ಲೇ ಮನೆ ಮಾಡಿದ್ದೆವು. ಸುಮಾರು ಒಂದೇ ಸಮಯಕ್ಕೆ ರಸ್ತೆಯಂಚಿನ ಬಸ್ ಹಿಡಿದು ಬಂದು ಯುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದೆವು.

"ಈ ಕೆಲಸದಿಂದ ರೋಸಿಹೋಗಿದ್ದೇನೆ" ವಾಲ್ಟರ್ ಹೇಳಿದ.

"ನಾನೂ ಕೂಡ"

ನಿಟ್ಟುಸಿರು ಬಿಟ್ಟು ಕಾರ್ಡ್ ಪಂಚ್ ಮಾಡಿದೆವು. ಆಡಳಿತಕ್ಕೆಂದು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ತಾತ್ಕಾಲಿಕ ಷೆಡ್ ನ ಬಟ್ಟೆ ಬದಲಾಯಿಸುವ ಕೋಣೆಗೆ ಹೋದೆವು.

"ಈವತ್ತು ಲೇಟಾಯಿತಾ?" ಆ ಕೋಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯುವಕ ಕೇಳಿದ.

ನಾವು ಉತ್ತರ ಕೊಡುವ ತೊಂದರೆ ತೆಗೆದುಕೊಳ್ಳಲಿಲ್ಲ. ನಮ್ಮ ಲಾಕರುಗಳ ಬೀಗದ ಕೈ ತೆಗೆದುಕೊಂಡು ಒಳಗಡೆ ಹೋಗಿ ಬೇಗ ಬಟ್ಟೆ ಬದಲಾಯಿಸಿ, ಸಮವಸ್ತ್ರ ಧರಿಸಿದೆವು. ನಮ್ಮ ತುಫಾಕಿಕಳನ್ನು, ಅದರ ಜತೆಗೆ (ಒಬ್ಬರಿಗೆ ಇಪ್ಪತ್ತರಂತೆ) ಗುಂಡುಗಳನ್ನು ತೆಗೆದುಕೊಂಡು – ಯುದ್ಧದ ಮುಂಚೂಣಿಯ ದಾರಿಯನ್ನು ಹಿಡಿದೆವು.

ಯುದ್ಧಕ್ಕೆ ನಿಗದಿಯಾದ ಜಾಗ, ನಗರದಾಚೆಯ ಖಾಲಿ ಮೈದಾನ. ಮೈದಾನದ ಸುತ್ತಲೂ ಮುಳ್ಳಿನ ಬೇಲಿ ಹಾಕಿ, ದೊಡ್ಡ ಫಲಕಗಳನ್ನು ನೇತು ಹಾಕಿದ್ದರು - "ಎಚ್ಚರಿಕೆ: ಯುದ್ಧ ನಡೆಯುತ್ತಿದೆ. ದೂರವಿರಿ." ಈ ಎಚ್ಚರಿಕೆ ಅನಾವಶ್ಯಕವಾಗಿತ್ತು. ಬೇಸಿಗೆಯ ರಜೆಗೆ ತಕ್ಕಂತಿದ್ದ ಆ ಜಾಗಕ್ಕೆ ರಜಾ ಕಳೆಯಲು, ಪಿಕ್ನಿಕ್ ಗೆಂದು, ಬೆರಳೆಣಿಕೆಯಷ್ಟು ಜನ ಬರುತ್ತಿದ್ದರು. ಅಷ್ಟೇ.
ನಾವು ಯುದ್ಧ ಮಾಡುತ್ತಿದ್ದವರು – ಎರಡು ಕಿಲೋಮೀಟರ್ ಉದ್ದದ ಹಳ್ಳವೊಂದನ್ನು ಆಕ್ರಮಿಸಿಕೊಂಡು ಇರುತ್ತಿದ್ದೆವು. ನಾವೆಂದೂ ಕಾಣದ ನಮ್ಮ ಶತ್ರುಗಳು ಎದುರಿಗೆ ಒಂದು ಕಿಲೋಮೀಟರ್ ದೂರದಲ್ಲಿ ಮತ್ತೊಂದು ಹಳ್ಳದಲ್ಲಿ ಅಡಗಿರುತ್ತಿದ್ದರು. ಆ ಎರಡು ಹಳ್ಳಗಳ ನಡುವಿನ ಜಾಗ – ಯುದ್ಧ ತೀವ್ರವಾಗಿದ್ದ ಕಾಲದ ನೆನಪುಗಳ ಪಳೆಯುಳಿಕೆಗಳಾಗಿ ಕೆಟ್ಟ ಅವಶೇಷಗಳಿಂದ ತುಂಬಿತ್ತು: ಮುರಿದ ಟ್ಯಾಂಕುಗಳು, ಆಯುಧಗಳನ್ನು ತರುತ್ತಿದ್ದ ಹಳೆಯ ಕಾರುಗಳು, ಕುದುರೆಗಳ ಮೂಳೆಗಳು... ಹೀಗೆ. ಈಗ ಬಿಕ್ಕಟ್ಟು ಒಂದು ಹದಕ್ಕೆ ಬಂದಿತ್ತು. ನಮ್ಮ ಕಮಾಂಡರ್ ಭಾಷೆಯಲ್ಲಿ ಹೇಳುವುದಾದರೆ ನಾವೀಗ ಇದ್ದಂತೆ ಇರುವ ಆಪರೇಷನ್ ನಡೆಸುತ್ತಿದ್ದೆವು. ಈಗೀಗ ಯುದ್ಧಗಳು ನಡೆಯುತ್ತಿರಲಿಲ್ಲ. ನಮಗೆ ನಮ್ಮ ಅಧಿಕಾರಿಗಳು ಕೊಟ್ಟ ಉಪದೇಶವೆಂದರೆ – ಎಂದೂ ಹಳ್ಳದಾಚೆ ಹಣಕಿ ನೋಡಬೇಡಿ ಎಂದಷ್ಟೇ. ಈ ನಿಯಮ ನನಗೆ ಸ್ವಲ್ಪ ಕಷ್ಟ ಕೊಡುತ್ತಿತ್ತು; ಕಾರಣ – ನನ್ನ ಕಡೆಯ ಮಗ ಗುಂಡಿನ ಖಾಲಿ ಲೋಹದ ಭಾಗ ಬೇಕೆಂದು ಬಹಳ ದಿನಗಳಿಂದ ಕೇಳುತ್ತಿದ್ದ. ಅದನ್ನು ಪಡೆಯಲು ಮಾತ್ರ ಸಾಧ್ಯವೇ ಆಗಿರಲಿಲ್ಲ. ಹುಡುಗ ಮಾತ್ರ ಕೇಳುತ್ತಲೇ ಇದ್ದ. ನಾನೂ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ನಾವು ನಮ್ಮ ಹಳ್ಳಕ್ಕೆ ಸೇರಿಕೊಂಡೆವು – ನಾನು ಮತ್ತು ವಾಲ್ಟರ್. ಆ ಜಾಗ ಅಹಿತಕರವಾಗೇನೂ ಇರಲಿಲ್ಲ. ಅಲ್ಲಿ ಮೇಜುಗಳು, ಕುರ್ಚಿ, ಒಂದು ಸಣ್ಣ ಅಗ್ಗಿಷ್ಟಿಕೆ, ಅಡುಗೆ ಪಾತ್ರೆಗಳು, ಒಂದು ರೆಕಾರ್ಡ್ ಪ್ಲೇಯರ್, ಪುಟ್ಟ ಟಿವಿ – ಎಲ್ಲವೂ ಇದ್ದುವು. ಒಂದಾಟ ಇಸ್ಪೀಟು ಹಾಕಬಹುದೆಂದು ನಾನು ಸೂಚಿಸಿದೆ.

ವಾಲ್ಟರ್ ಅಸಹನೆಯಿಂದ ತುಫಾಕಿಯನ್ನು ಪರೀಕ್ಷಿಸುತ್ತಾ "ಆಮೇಲೆ" ಎಂದ. "ದರಿದ್ರದ್ದು, ಕೆಲಸ ಮಾಡ್ತಾ ಇಲ್ಲ" ಎಂದು ಘೋಷಿಸಿದ.

"ಅದು ಹದಿನೈದು ವರ್ಷಕ್ಕೂ ಹಿಂದಿನ ತುಫಾಕಿ – ಅದರ ಜೀವಮಾನದಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದೆ." ಎನ್ನುತ್ತಾ ನಾನು ನನ್ನ ಆಯುಧವನ್ನು ಅವನ ಕೈಗೆ ಕೊಟ್ಟೆ. ಆ ಕ್ಷಣಕ್ಕೆ ನಮ್ಮ ತಲೆಯ ಮೇಲಿಂದ ಒಂದು ಗುಂಡು ಹಾದು ಹೋದ ಶಬ್ದ ಕೇಳಿಸಿತು.

"ಎದುರಾಳಿ ಮೂರ್ಖರು. ಹೀಗೇ ಮಾಡುತ್ತಿದ್ದರೆ ಯಾವತ್ತೋ ಯಾರಿಗಾದರೂ ಗಾಯ ಆಗುತ್ತೆ ಅಷ್ಟೇ." ಎಂದವನೇ ನನ್ನ ಆಯುಧವನ್ನು ಎತ್ತಿಹಿಡಿದು ಗಾಳಿಯಲ್ಲಿ ಎರಡು ಗುಂಡು ಹಾರಿಸಿದ.

"ನಿಮಗೆ ಇದೊಂದು ಎಚ್ಚರಿಕೆಯಾಗಲಿ" ಎಂದು ಜೋರಾಗಿ ಅರಚಿ ಕೂತುಕೊಂಡ. ಅಷ್ಟರಲ್ಲಿ ಒಬ್ಬ ಸಹಾಯಕ ವಯರಿಲ್ಲದ ಟೆಲಿಫೋನು ಹಿಡಿದು ತಂದು "ವಾಲ್ಟರ್ ಸರ್, ನಿಮಗೆ ಮೇಡಂ ಫೋನು ಬಂದಿದೆ" ಎಂದ.

"ಅವಳನ್ನು ದೆವ್ವ ಹೊತ್ತೊಯ್ಯಲಿ. ಇಲ್ಲೂ ನನ್ನನ್ನ ಶಾಂತಿಯಿಂದಿರೋದಕ್ಕೆ ಬಿಡೋದಿಲ್ಲ" ಎಂದು ಕೂಗಿ ಫೋನ್ ಕೈಗೆತ್ತಿಕೊಂಡ.

"ಹಲೋ.. ಹೌದು ನಾನೇ. ಚೆನ್ನಾಗಿದ್ದೀನಿ. ಅರೇ, ಚೆನ್ನಾಗಿದ್ದೀನಿ ಅಂದೆನಲ್ಲಾ. ನಂಗೇನೂ ಆಗಿಲ್ಲ. ಈಗಾಗಲೇ ಹೇಳಿದೆನಲ್ಲಾ ನಂಗೇನೂ ಆಗಿಲ್ಲ. ನಿಂಗೆ ಭಯ ಆಗುತ್ತೇಂತ ನಂಗೊತ್ತು. ಆದರೆ ನಾನು ಚೆನ್ನಾಗೇ ಇದ್ದೀನಿ. ಬೆಚ್ಚಗೆ ಬಟ್ಟೆ ಹಾಕ್ಕೊಂಡಿದ್ದೀನಿ. ಮಳೆ ಬರ್ತಾ ಇಲ್ಲ. ಕೇಳಿಸ್ತಾ... ಎಲ್ಲ ಸರಿಯಾಗಿದೆ. ನೀನೇನೂ ಕ್ಷಮೆ ಕೇಳಬೇಡ. ನಂಗೆ ಅರ್ಥವಾಗುತ್ತೆ.. ಬರಲಾ..."

"ಈ ಹೆಣ್ಣು ನಿಜಕ್ಕೂ ಪ್ರಾಣ ತಿಂತಾಳೆ". ಟೆಲಿಫೋನನ್ನು ಸಹಾಯಕನಿಗೆ ಕೊಡುತ್ತಾ ವಾಲ್ಟರ್ ಗೊಣಗಿದ. ನಾನೇನೂ ಅನ್ನಲಿಲ್ಲ. ನನಗೂ ನನ್ನ ಹೆಂಡತಿಯ ತೊಂದರೆಯಿತ್ತು. ಆದರೆ ಅದು ಬೇರೆಯ ರೀತಿಯ ತೊಂದರೆ: ನಾವು ಯುದ್ಧ ಮಾಡುತ್ತಿದ್ದೇವೆ ಎಂದು ನಂಬಲು ಅವಳು ತಯಾರಿರಲಿಲ್ಲ. ನನ್ನಿಡೀ ದಿನವನ್ನು ನಾನು ಮೊಟೇಲಿನಲ್ಲಿ ಕಳೆಯುತ್ತೇನೆಂದು ಅವಳು ಭಾವಿಸುತ್ತಿದ್ದಳು. ಇದು ಯಾವ ರೀತಿಯ ಯುದ್ಧ ಎಂದು ಅವಳಿಗೆ ವಿವರಿಸಿ ಹೇಳುವ ಬಯಕೆ ನನಗೆ ಇತ್ತಾದರೂ ನನಗೇ ಗೊತ್ತಿರಲಿಲ್ಲವಾದ್ದರಿಂದ ಸುಮ್ಮನಾಗಿದ್ದೆ. ಹಾಗೆ ನೋಡಿದರೆ ಯಾರಿಗೂ ಈ ವಿಷಯ ಗೊತ್ತಿದ್ದಂತಿರಲಿಲ್ಲ. ಅದು ಎಷ್ಟು ಗೊಂದಲಮಯವಾಗಿತ್ತೆಂದರೆ, ಈ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಒಂದು ವಿಶೇಷ ಆಯೋಗವನ್ನು ಏರ್ಪಾಟು ಮಾಡಲಾಗಿತ್ತು. ಆ ಆಯೋಗದ ಮುಖ್ಯಸ್ಥ ಆಗಾಗ ನಮ್ಮನ್ನು ನೋಡಲು ಬರುತ್ತಿದ್ದ. ಬಂದಾಗಲೆಲ್ಲ ಇನ್ಸ್ ಪೆಕ್ಷನ್ ಗಾಗಿ ತನಗೆ ನೀಡಿರುವ ಕಾರಿನ ಬಗ್ಗೆ ಗೊಣಗಾಡುತ್ತಿದ್ದ: ಅವನ ಪ್ರಕಾರ ಅದು ಹಳೆಯ ಲಡಾಸುಗಾಡಿಯಾಗಿತ್ತು. ಆದರೆ ಖರ್ಚು ಹೆಚ್ಚಾಗುವುದೆಂಬ ಕಾರಣದಿಂದ ಅದನ್ನು ಬದಲಾಯಿಸಲು ಅಧಿಕಾರಿಗಳು ನಿರಾಕರಿಸಿದ್ದರಂತೆ.

ಅಂದು ಬೆಳಿಗ್ಗೆ ಯುದ್ಧರಂಗದಲ್ಲಿ ಎಲ್ಲ ಶಾಂತವಾಗಿತ್ತು. ನಮ್ಮಲ್ಲೊಬ್ಬರು ಒಂದು ಗುಂಡು ಹಾರಿಸಿದೆವು. ಅಲ್ಲಿಂದ ಉತ್ತರ ಬಂತು. ಅಷ್ಟೇ. ಮಧ್ಯಾಹ್ನಕ್ಕೆ ನಮಗೆ ಊಟ ಹಾಕಿದರು. ಹಸಿ ತರಕಾರಿಗಳು, ಹುರಿದ ಮಾಂಸ, ಗ್ರೀಕ್ ಅನ್ನ. ಜತೆಗೆ ರುಚಿಹೀನ ಕಡುಬು.

"ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಗ್ತಾ ಇದೆ" ವಾಲ್ಟರ್ ಗೊಣಗಾಡಿದ. ಸಹಾಯಕ "ಇದೇನು ಹೋಟೇಲೆಂದುಕೊಂಡಿರಾ" ಎಂದು ಮರುನುಡಿದ. ವಾಲ್ಟರ್ ಉತ್ತರಿಸಲಿಲ್ಲ.

ನಾವು ಮಧ್ಯಹ್ನದ ನಿದ್ದೆಗೆಂದು ಮಲಗಿದೆವು. ಶಾಂತಿಯಿಂದ ನಿದ್ದೆ ಮಾಡಿದೆವು. ಎದ್ದಾಗ ಕತ್ತಲಾಗಿತ್ತು.
"ನಾನು ಹೊರಡುತ್ತೇನೆ." ವಾಲ್ಟರ್ ಗೆ ಹೇಳಿದೆ. ಅವನು ನನ್ನ ಜೊತೆ ಬರುವುದು ಸಾಧ್ಯವಿರಲಿಲ್ಲ. ಅವನು ಅಂದು ನೈಟ್ ಡ್ಯೂಟಿಯ ಮೇಲೂ ಇದ್ದ. ನಾನು ಬಟ್ಟೆಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿದೆ.

"ಹೇಗಿತ್ತು ಯುದ್ಧ?" ಹೊರಗಡೆ ಅದೇ ತಲೆಹರಟೆ ಯುವಕ ವಿಚಾರಿಸಿದ.

"ಚೆನ್ನಾಗಿತ್ತು. ಸಮರ್ಪಕವಾಗಿತ್ತು." ಎಂದು ಹೇಳಿ ಆಡಳಿತ ವಿಭಾಗಕ್ಕೆ ಹೋದೆ. ಅಲ್ಲಿ ಹುಳಿಮುಖದ ಅಧಿಕಾರಿಯಿಂದ ನನ್ನ ಸಂಬಳವನ್ನು ಪಡೆದುಕೊಂಡೆ. ರಸೀದಿಯ ಮೂರು ಪ್ರತಿಗಳ ಮೇಲೆ ಸಹಿ ಹಾಕಿದೆ. ಬಸ್ ನಿಲ್ದಾಣಕ್ಕೆ ಬಂದಾಗ ಇನ್ನೂ ಬಹಳವೇ ಸಮಯವಿತ್ತು.

ಮನೆಯಲ್ಲಿ ಎಂದಿನಂತೆ, ಹೆಂಡತಿ ನನಗಾಗಿ ಬಟ್ಟೆ ಧರಿಸಿ ಕಾಯುತ್ತಿದ್ದಳು. ನಾನು ಹೋದಕೂಡಲೇ ಒಣ ಧ್ವನಿಯಲ್ಲಿ "ನಾನು ತಯಾರಾಗಿದ್ದೇನೆ" ಅಂದಳು. ಬೆಡ್ ರೂಮಿಗೆ ಹೋಗಿ ನಾನೂ ನನ್ನ ಬಟ್ಟೆ ಧರಿಸಿದೆ. ಇಬ್ಬರೂ ಓದುವ ಕೋಣೆಗೆ ಹೋಗಿ ಸ್ಥಾಯಿ ಸೈಕಲ್ ಗಳ ಮೇಲೆ ಕೂತೆವು.

"ನಾವೆಲ್ಲಿದ್ದೆವು?" ನಾನು ಕೇಳಿದೆ.

"ನಿನಗೆ ಯಾವತ್ತೂ ನೆನಪಿರೋದೇ ಇಲ್ಲ." ಎನ್ನುತ್ತಾ ಅವಳು ನಕ್ಷೆಯನ್ನು ಕೈಗೆತ್ತಿಕೊಂಡಳು - "ಆಡ್ರಿಯಾಟಿಕ್ ತೀರದ ಮೇಲೆ ಬಿಸ್ಕೆಗ್ಲಿ.."

ಇಬ್ಬರೂ ಜೋರಾಗಿ ಪೆಡಲ್ ಒತ್ತಿದೆವು. ಎರಡು ಘಂಟೆಗಳ ನಂತರ ನಾವು ನಿಲ್ಲಿಸಿದಾಗ ಅದೇ ಆಡ್ರಿಯಾಟಿಕ್ ತೀರದ ಮಾಲ್ ಫೆಟ್ಟಾದಲ್ಲಿದೇದೆವು. ಒಂದು ವರ್ಷದಲ್ಲಿ ಇಟಲಿ ತಲುಪುವ ಯೋಜನೆ ನಮ್ಮದು. ಆಮೇಲೆ ಏನು ಮಾಡುವುದೋ ಯೋಚಿಸಿನೋಡಬೇಕು. ಯುದ್ಧದ ಕಾರಣ ನನಗೆ ದೀರ್ಘಕಾಲದ ಯೋಜನೆಗಳನ್ನು ಹಾಕುವುದು ಇಷ್ಟವಿಲ್ಲ. ಜೊತೆಗೆ ಭವಿಷ್ಯವನ್ನು ನಿಗೂಢವಾಗಿಡುವುದರಲ್ಲಿ ಒಂದು ಸ್ಥಾಯೀ ರೋಮಾಂಚನವಿದೆ.